ಮ್ಯಾಕ್‍ಡೊನೇಲ್, ಆರ್ಥರ್ ಆಂತೋಣಿ
1854-1930. ಆಂಗ್ಲ ಸಂಸ್ಕøತವಿದ್ವಾಂಸರು, ಹುಟ್ಟಿದ್ದು ಭಾರತದ ಬಿಹಾರ್ ರಾಜ್ಯದ ತಿರುಹುತ್ ಜಿಲ್ಲೆಗೆ ಸೇರಿದ ಮುಜಫರ್‍ಪುರದಲ್ಲಿ. ತಾಯಿ ಮಾರ್ಗರೆಟ್ ಜೇನ್ ಲಾಚ್‍ಲಾನ್. ತಂದೆ ಅಲೆಗ್ಸಾಂಡರ್ ಆಂತೋಣಿ ಮ್ಯಾಕ್‍ಡೊನೆಲ್ ಬ್ರಿಟಿಷ್ ಸೈನ್ಯದಲ್ಲಿದ್ದರು. ಏಳು ವರ್ಷದ ಆರ್ಥರ್ ತಾಯಿಯೊಡನೆ ಜರ್ಮನಿಗೆ ತೆರಳಿದರು. ಪ್ರಾರಂಭದ ವಿದ್ಯಾಭ್ಯಾಸ ಡ್ರೆಸ್‍ಡೆನಲ್ಲಿ ನಡೆಯಿತು. ಅಲ್ಲಿ ಒಮ್ಮೆ ಇವರು ಹುಡುಗಾಟದ ಸಾಹಸ ಮಾಡಲಿಕ್ಕೆ ಹೋಗಿ ಕಾಲುಗಳು ಶಕ್ತಿಹೀನವಾದುವು. ಆದರೆ ಇವರ ಬೌದ್ಧಿಕ ಚಟುವಟಿಕೆ ದ್ವಿಗುಣಗೊಂಡಿತು. ಆನಂತರ ಗೆಟಿಂಗನ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಅಲ್ಲಿ ಥಿಯೊಡಾರ್ ಬೆನ್ಛೆ ಅವರಲ್ಲಿ ಸಂಸ್ಕøತ ಮತ್ತು ತೌಲನಿಕ ಭಾಷಾಶಾಸ್ತ್ರವನ್ನು ಅಭ್ಯಸಿಸಿದರು. ಅಲ್ಲಿಂದ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ (1876) ಶಿಕ್ಷಣ ಮುಂದುವರಿಸಿ 1880ರಲ್ಲಿ ವಿಶ್ವವಿದ್ಯಾಲಯದಿಂದ ಹೊರಬಂದರು. ಅದೇ ವರ್ಷ ಜರ್ಮನ್ ಅಧ್ಯಾಪಕರಾಗಿಯೂ 1884ರಲ್ಲಿ ಬಾಲಿಯೋಲ್ ಕಾಲೇಜಿನ ಇಂಡಿಯನ್ ಸಿವಿಲ್ ಸರ್ವಿಸ್ ವಿದ್ಯಾರ್ಥಿಗಳಿಗೆ ಸಂಸ್ಕøತ ಅಧ್ಯಾಪಕರಾಗಿಯೂ ನಿಯುಕ್ತರಾದರು. ಈ ಸಂದರ್ಭದಲ್ಲಿ ಮ್ಯಾಕ್ಸ್ಮುಲರ್ ಅವರೊಡನೆ ಕೆಲಸ ಮಾಡುವ ಅವಕಾಶ ದೊರಕಿತು. ಆನಂತರ ಸಂಸ್ಕøತ ವಿದ್ವಾಂಸ ರುಡಾಲ್ಫ ರಾತ್ ಅವರ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧ ಬರೆದು ಲೀಪ್‍ಜಿಗ್ ವಿಶ್ವವಿದ್ಯಾಲಯದ ಪಿಎಚ್.ಡಿ. ಪಡೆದರು. ಮರಳಿ ಆಕ್ಸ್‍ಫರ್ಡಿಗೆ ಬಂದ ಮ್ಯಾಕ್‍ಡೊನೆಲ್ ಅವರನ್ನು ಬೊಡೆನ್ ಪ್ರೊಫೆಸರ್ ಹಾಗೂ ಇಂಡಿಯನ್ ಇನ್‍ಸ್ಟಿಟ್ಯೂಟ್‍ನ ಮುಖ್ಯಸ್ಥ ಆಗಿದ್ದ ಸರ್ ಮೋನಿಯರ್ ವಿಲಿಯಮ್ಸ್ ಅವರ ಸಹಾಯಕ ಅಧಿಕಾರಿಯಾಗಿ ನಿಯೋಜಿತರಾದರು (1888). ಮೋನಿಯರ್ ಅವರ ಮರಣಾನಂತರ ಮ್ಯಾಕ್‍ಡೊನೆಲ್ ಅವರೇ ಎರಡೂ ಹುದ್ದೆಗಳನ್ನು ವಹಿಸಿಕೊಂಡರು. ಜೊತೆಗೆ ಬಾಲಿಯೋಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರೂ ಆದರು. ಇಂಡಿಯನ್ ಇನ್‍ಸ್ಟಿಟ್ಯೂಟಿನ ಅಧಿಕಾರಿಯಾದ ಮೇಲೆ ಇವರು ಅದರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಗ್ರಂಥಾಲಯದ ಬೆಳೆವಣಿಗೆಯಲ್ಲಿ ವಿಶೇಷ ಆಸಕ್ತಿ ವಹಿಸಿದರು. 

	ಮ್ಯಾಕ್‍ಡೊನೆಲ್ ಅವರ ಚಟುವಟಿಕೆಗಳು ಆಕ್ಸ್‍ಫರ್ಡಿಗೆ ಮಾತ್ರ ಸೀಮಿತ ಆಗಿರಲಿಲ್ಲ. ಹೊರಗೂ ಇವರು ನಾನಾ ಸಂಸ್ಥೆಗಳ ಸದಸ್ಯತ್ವ ಹೊಂದಿದ್ದರು. ಹಲವಾರು ಗೌರವ ಪದವಿಗಳನ್ನು ಪಡೆದರು. 1906ರಲ್ಲಿ ಬ್ರಿಟಿಷ್ ಅಕಡೆಮಿಯ ಗೌರವ ಫೆಲೋ ಆಗಿ ಆಯ್ಕೆಯಾದರು. 1911--13 ಅವಧಿಯಲ್ಲಿ ವಿದ್ಯಾಸಂಸ್ಥೆಗಳ ಅಂತಾರಾಷ್ಟ್ರೀಯ ಸಂಘದ ಸಮಿತಿಯಲ್ಲಿ ಬ್ರಿಟಿಷ್ ಅಕಡೆಮಿಯನ್ನು ಪ್ರತಿನಿಧಿಸಿದರು. ರಾಯಲ್ ಏಷ್ಯಾಟಿಕ್ ಸೊಸೈಟಿಯ ಸದಸ್ಯರೂ ಮೂರು ವರ್ಷ(1921-24) ಅದರ ಉಪಾಧ್ಯಕ್ಷರೂ ಆಗಿದ್ದರು. 

	1913ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿಯ ಮುಂಬಯಿ ಶಾಖೆ ತಮ್ಮ ಕ್ಯಾಂಪ್‍ಬೆಲ್ ಸ್ಮಾರಕ ಪದಕವನ್ನು ಪಡೆಯಲು ಇವರನ್ನು ಆರಿಸಿತು. 1928ರಲ್ಲಿ ಬಾಲಿಯೋಲ್ ಗೌರವ ಫೆಲೋ ಆಗಿ ಇವರನ್ನು ಆರಿಸಿತು. ತಾವು ಹಿಂದೆ ಶಿಕ್ಷಣ ಪಡೆದ ಕಾರ್ಪಸ್ ಕ್ರಿಸ್ಟಿ ಕಾಲೇಜಿನ ಸಂಬಂಧವೂ ಮತ್ತೆ 1921ರಲ್ಲಿ ದೊರಕಿ ಅದರ ಗೌರವ ಫೆಲೋ ಆಗಿ ಆಯ್ಕೆಗೊಂಡರು. 

	1904 ರಿಂದ ಭಾರತ ಮತ್ತು ಅಮೆರಿಕ ದೇಶಗಳಲ್ಲಿ ಪ್ರವಾಸ ಮಾಡಿದರು. 1904ರಲ್ಲಿ ಮಿಸ್ಸೊರಿಯ ಸೇಂಟ್ ಲೂಯಿಯಲ್ಲಿ ನಡೆದ ಕಲೆ ಮತ್ತು ವಿಜ್ಞಾನಗಳ ಕಾಂಗ್ರೆಸ್‍ನಲ್ಲಿ ಸಂಸ್ಕøತ ಭಾಷೆ ಮತ್ತು ಸಾಹಿತ್ಯವನ್ನು ಪ್ರತಿನಿಧಿಸಿದರು. 1912ರಲ್ಲಿ ಕೆನಡಕ್ಕೆ ಭೇಟಿ ನೀಡಿದರು. ಭಾರತ ಪ್ರವಾಸ ಕೈಗೊಂಡು (1907-08) ಪ್ರವಾಸಕಾಲದಲ್ಲಿ ಬೋಡೀಲಿಯನ್ ಗ್ರಂಥಭಂಡಾರಕ್ಕಾಗಿ ಸಂಸ್ಕøತ ಹಸ್ತಪ್ರತಿಗಳ ಬೃಹತ್ ಸಂಗ್ರಹ ಮಾಡಿದರು. ಇದರೊಂದಿಗೆ ಪ್ರಾಚ್ಯವಸ್ತುಗಳ ನೂರಾರು ಛಾಯಾಚಿತ್ರಗಳನ್ನು ಸಿದ್ಧಪಡಿಸಿದರು; ಅನಂತರ ಇವನ್ನು ಇಂಡಿಯನ್ ಇನ್‍ಸ್ಟಿಟ್ಯೂಟಿಗೆ ದಾನ ಮಾಡಿದರು. ಈ ಪ್ರವಾಸ ಭಾರತೀಯ ದೇವಾಲಯಗಳ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪಗಳ ಬಗ್ಗೆ ಇವರಲ್ಲಿ ಸಮಗ್ರದೃಷ್ಟಿ ಬೆಳೆಯಲು ಅವಕಾಶ ಕಲ್ಪಿಸಿತು. ಇದನ್ನು ಬ್ರಿಟಿಷ್ ಅಕಡೆಮಿ ಮತ್ತು ರಾಯಲ್ ಸೊಸೈಟಿ ಆಫ್ ಆಟ್ರ್ಸ್‍ಗಳಲ್ಲಿತ್ತ ಉಪನ್ಯಾಸಗಳಲ್ಲಿ (1909) ಸ್ಪಷ್ಟವಾಗಿ ಕಾಣಬಹುದು. 1922-23ರಲ್ಲಿ ಮತ್ತೊಮ್ಮೆ ಭಾರತಕ್ಕೆ ಬಂದರು. ಆಗ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಧರ್ಮಗಳ ತೌಲನಿಕ ಅಧ್ಯಯನ ಕುರಿತು ಸ್ಪಿಫನಾಸ್ ನಿರ್ಮಲ್ಲೇಂದು ಉಪನ್ಯಾಸಗಳನ್ನು ನೀಡುವುದು ಇವರ ಉದ್ದೇಶವಾಗಿತ್ತು. ಇವರು ಒಂದನೆಯ ಮಹಾಯುದ್ಧದಲ್ಲಿಯೂ ಭಾಗವಹಿಸಿ(1915-20) ಗೂಢಾಚಾರ ವಿಭಾಗದಲ್ಲಿ ಸೇವೆ ಸಲ್ಲಿಸಿದರು. 

	ಮ್ಯಾಕ್‍ಡೊನೆಲ್ 1890ರಲ್ಲಿ ಮೇರಿ ಲೌಸಿ ಎಂಬುವರನ್ನು ಮದುವೆಯಾದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬನೇ ಮಗ. ಮಗ 1915 ರ ಯುದ್ಧದಲ್ಲಿ ಮಡಿದ. ಇವರು ಯುವಕರಾಗಿದ್ದಾಗ ತುಂಬ ಹುರುಪಿನಿಂದ ಕೂಡಿದ್ದರು. ತಮ್ಮ ನಾನಾ ಪ್ರಕಾರವಾದ ಚಟುವಟಿಕೆಗಳಿಂದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಹೆಸರುವಾಸಿಯಾಗಿದ್ದರು. ದೋಣಿ ನಡೆಸುವುದರಲ್ಲಿ ಇವರಿಗಿದ್ದ ಆಸಕ್ತಿ ಮಧ್ಯ ವಯಸ್ಸಿನ ತನಕವೂ ಇತ್ತೆಂಬುದು 1890-93ರಲ್ಲಿ ಪ್ರಕಟವಾದ ಇವರ ಎರಡು ಕಿರುಹೊತ್ತಗೆಗಳು ತೋರಿಸುತ್ತವೆ. 

	ಎರಡನೆಯ ಭಾರಿ ಭಾರತದ ಪ್ರವಾಸಮಾಡಿ ಬಂದ ಮೇಲೆ ಪಾಶ್ರ್ವವಾಯುವಿಗೆ ತುತ್ತಾದರು. ಇದರಿಂದಾಗಿ (1926) ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾಗಬೇಕಾಯಿತು. ಎರಡನೆಯ ಬಾರಿ ಪಾಶ್ರ್ವವಾಯು ಬಡಿದು ಸಾವನ್ನಪ್ಪಿದ್ದರು. 

	ಮ್ಯಾಕ್‍ಡೊನೆಲ್ ಅವರ ಗ್ರಂಥಗಳೆಲ್ಲ ಪ್ರಧಾನವಾಗಿ ವೇದಕ್ಷೇತ್ರಕ್ಕೆ ಸೇರಿದವು. ವೇದದಲ್ಲಿಯ ಮಂತ್ರಭಾಗಗಳಿಗೆ ಸೂಚಿಯಾದ ಸರ್ವಾನುಕ್ರಮಣಿಯನ್ನು (1886) ಮತ್ತು ವೇದದೇವತಾ ವಿಷಯಗಳನ್ನು ನಿರೂಪಿಸುವ ಬೃಹದ್ದೇವತಾ ಗ್ರಂಥವನ್ನು (2 ಸಂಪುಟಗಳು, 1904) ಪರಿಷ್ಕರಿಸಿದರು. ಬ್ಯೂಲರನ ಇಂಡೊ-ಆರ್ಯನ್ ಸಂಶೋಧನೆಗಳ ವಿಶ್ವಕೋಶಕ್ಕೆ ಎರಡು ಗ್ರಂಥಗಳನ್ನು ರಚಿಸಿಕೊಟ್ಟರು-ವೇದಿಕ್ ಮೈಥಾಲಜಿ (1897) ಮತ್ತು ವೇದಿಕ್ ಗ್ರಾಮರ್ (1910). ಮೊದಲನೆಯದು ವೈದಿಕ ದೇವತೆಗಳನ್ನು ಕುರಿತದ್ದಾಗಿದೆ. ಇದು ವೇದ ಸಂಸ್ಕøತವನ್ನು ಇಂಗ್ಲಿಷಿನಲ್ಲಿ ವರ್ಣಿಸಿರುವ ವಿಸ್ತಾರವಾದ ಮತ್ತು ನಿಷ್ಕøಷ್ಟವಾದ ಪ್ರಥಮ ಹಾಗೂ ಏಕೈಕ ವ್ಯಾಕರಣ. ಇದಕ್ಕೆ ಮೊದಲು ನಿಷ್ಕøಷ್ಟತೆಗೆ ಹೆಸರಾದ ವ್ಹಿಟ್ನಿಯವರ ಸಂಸ್ಕøತ ವ್ಯಾಕರಣ ಪ್ರಕಟವಾಗಿತ್ತು. ಆದರೆ ಇದರಲ್ಲಿ ವೇದ ಹಾಗೂ ಲೌಕಿಕ ಸಂಸ್ಕøತಗಳೆರಡನ್ನೂ ವರ್ಣಿಸಿರುವ ಕಾರಣ ಅರ್ಥವಿವರಣೆಯಲ್ಲಿ ತೊಡಕಿದೆ. ಸರಳವಾದ ಭಾಷೆಯಲ್ಲಿ ಪ್ರಾರಂಭಿಕ ಸಂಸ್ಕøತ ವ್ಯಾಕರಣವೊಂದನ್ನು (ಸಂಸ್ಕøತ್ ಗ್ರಾಮರ್ ಫಾರ್ ಬಿಗಿನರ್ಸ್, 1901) ರಚಿಸಿದರು. ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ವೇದ ವ್ಯಾಕರಣವನ್ನು (ವೇದಿಕ್ ಗ್ರಾಮರ್ ಫಾರ್ ಸ್ಟೂಡೆಂಟ್ಸ್, 1916) ರಚಿಸಿದರು.ಇದು ವೇದಿಕ್ ಗ್ರಾಮರ್ ಹೆಬ್ಬೊತ್ತಗೆಯ ಸಂಗ್ರಹವೆನಿಸಬಹುದಾದರೂ ಅದರಲ್ಲಿ ಇಲ್ಲದ ಅನೇಕ ವಿಷಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ಉಪಯೋಗಕ್ಕಾಗಿ ವೈದಿಕ ಛಂದಸ್ಸು ಮತ್ತು ಸ್ವರಗಳ ಪರಿಚಯಮಾಡಿ ಧಾತುಕೋಶವೊಂದನ್ನು ಸೇರಿಸಲಾಗಿದೆ. ಈ ವ್ಯಾಕರಣ ಅಂಶಗಳು ಸುಲಭವಾಗಿ ಮನವರಿಕೆಯಾಗಲು ಇದರ ಹಿಂದೆಯೇ ವೇದಿಕ್ ರೀಡರ್(1917) ಒಂದನ್ನು ಸಿದ್ಧಪಡಿಸಿದರು. ಇದರಲ್ಲಿ ಋಗ್ವೇದದಿಂದ ಆರಿಸಿದ 30 ಸೂಕ್ತಗಳಿವೆ. ಪ್ರತಿ ಮಂತ್ರಕ್ಕೂ ಪದಪಾಠ ಅನುವಾದ ಮತ್ತು ವ್ಯಾಕರಣ ಟಿಪ್ಪಣಿಗಳನ್ನು ಕೊಡಲಾಗಿದೆ. ವೇದಕ್ಷೇತ್ರಕ್ಕೆ ಸಂಬಂಧಿಸಿದ ಇನ್ನೊಂದು ಕೃತಿ ವೇದಿಕ್ ಇಂಡೆಕ್ಸ್ ಆಫ್ ನೇಮ್ ಆಂಡ್‍ಸಬ್‍ಜೆಕ್ಟ್ಸ್ (2 ಸಂಪುಟಗಳು, 1912). ತಮ್ಮ ವಿದ್ಯಾರ್ಥಿ ಎ.ಬಿ.ಕೀತ್ ಅವರೊಡನೆ ಇದನ್ನು ಸಿದ್ದಪಡಿಸಲಾಗಿದೆ. ವೇದಗಳಲ್ಲಿ ಕಂಡುಬರುವ ಹೆಸರುಗಳ ಮತ್ತು ವಿಷಯಗಳ ಟಿಪ್ಪಣಿಯುತ ಸೂಚಿಯಾದ ಈ ಕೃತಿ ಸಂಶೋಧಕರಿಗೆ ತುಂಬ ಉಪಕಾರಿಯಾಗಿದೆ. ಇವರ ಸಂಸ್ಕøತ ಸಾಹಿತ್ಯ ಚರಿತ್ರೆಯಲ್ಲಿ (ಹಿಸ್ಟರಿ ಆಫ್ ಸಂಸ್ಕøತ ಲಿಟರೇಚರ್, 1900) ವೇದ ಸಾಹಿತ್ಯಕ್ಕೆ ಹೆಚ್ಚಿನ ಗಮನವಿತ್ತರೂ ಲೌಕಿಕ ಸಾಹಿತ್ಯದ ಎಲ್ಲ ಭಾಗಗಳನ್ನೂ ವಿಮರ್ಶಿಸಿದ್ದಾರೆ. ಕಲ್ಕತ್ತ ವಿಶ್ವವಿದ್ಯಾಲಯದಲ್ಲಿತ್ತ ಉಪನ್ಯಾಸಗಳು `ಲೆಕ್ಚರ್ಸ್ ಆನ್ ಕಂಪ್ಯಾರಟಿವ್ ರಿಲಿಜನ್ ಎಂಬ ಹೆಸರಿನಲ್ಲಿ 1925ರಲ್ಲಿ ಪ್ರಕಟವಾಗಿವೆ. ಭಾರತದ ಸಾಹಿತ್ಯ, ಭಾಷೆ, ಧರ್ಮ, ಪ್ರಾಚ್ಯವಸ್ತುಗಳು ಇವೆಲ್ಲವನ್ನೂ ಚಿಕ್ಕದಾಗಿ ನಿರೂಪಿಸುವ. ಇಂಡಿಯಾಸ್ ಪಾಸ್ಟ್ (1927) ಭಾರತೀಯ ಅಧ್ಯಯನಗಳಿಗೆ ಒಂದು ಪಠ್ಯಪುಸ್ತಕದಂತಿದೆ. ಒಂದೇ ಸಂಪುಟದಲ್ಲಿ ಭಾರತದ ಪುರಾತನ ವೈಭವವನ್ನು ಸರಳವಾಗಿ ಸಾರುವುದೇ ಈ ಕೃತಿಯ ವಿಶೇಷ. ಸಂಸ್ಕøತ ಇಂಗ್ಲಿಷ್ ಶಬ್ದಕೋಶವೊಂದನ್ನು ಸಿದ್ಧಪಡಿಸಿ (1924) ತಮ್ಮ ವೈದುಷ್ಯ ಎಲ್ಲರನ್ನೂ ಮುಟ್ಟುವಂತೆ ಮಾಡಿದ್ದಾರೆ. ಇವಲ್ಲದೆ ಅನೇಕ ಲೇಖನಗಳನ್ನೂ ಗ್ರಂಥ ವಿಮರ್ಶೆಗಳನ್ನೂ ಪ್ರಕಟಿಸಿ ಸಂಸ್ಕøತ ಸಾಹಿತ್ಯ ಹಾಗೂ ತತ್‍ಸಂಬಂಧವಾದ ವಿಷಯಗಳ ಹೆಚ್ಚಿನ ತಿಳಿವಳಿಕೆ ದುಡಿದಿದ್ದಾರೆ. 					
		(ಆರ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ